ಕಿಗೋಮ ಪ್ರದೇಶ

ಟಾಂಗನ್ಯೀಕದ ಒಂದು ಪ್ರದೇಶ. 1963ರ ಮೇ ತಿಂಗಳಿನಲ್ಲಿ ಪುನರ್ರಚಿತವಾದ ಆಡಳಿತ ಘಟಕಗಳಲ್ಲೊಂದು. ಹಿಂದಣ ಪಶ್ಚಿಮ ಪ್ರದೇಶದಲ್ಲಿದ್ದ ಕಿಗೋಮ, ಕಿಬೋಂಡೋ ಮತ್ತು ಕಸೂಲು ಜಿಲ್ಲೆಗಳು ಇದರಲ್ಲಿವೆ. ವಾಯುವ್ಯದಲ್ಲಿ ಬುರುಂಡಿ, ಈಶಾನ್ಯದಲ್ಲಿ ಶಿನ್ಯಾಂಗ ಪ್ರದೇಶ, ಪೂರ್ವದಕ್ಷಿಣಗಳಲ್ಲಿ ಟಬೋರ ಪ್ರದೇಶ, ಪಶ್ಚಿಮದಲ್ಲಿ ಟಾಂಗನ್ಯೀಕ ಸರೋವರ-ಇವು ಇದರ ಮೇರೆಗಳು. ಕಿಗೋಮದ ಜನಸಂಖ್ಯೆ 3.83.505 (1957). ಕಿಗೋಮ ಪ್ರದೇಶದಲ್ಲಿ ಮಧ್ಯ ಟಾಂಗನ್ಯೀಕ ಪ್ರಸ್ಥಭೂಮಿ ಮೇಲ್ಮುಖವಾಗಿ ಮಡಿಸಿಕೊಂಡಿದೆ. ಇಲ್ಲಿಯ ಉನ್ನತ ಶಿಖರದ ಹೆಸರು ಕುಂಗ್ವೆ (8.230).  ಈ ಪ್ರದೇಶದ ಉತ್ತರ ಭಾಗದಲ್ಲಿ ಮಲಾಗರಾಸಿ ನದಿಯೂ ಅದರ ಉಪನದಿಯಾದ ಮೊಯೋವೋಸಿಯೂ ಹರಿದು ಟಾಂಗನ್ಯೀಕ ಸರೋವರವನ್ನು ಸೇರುತ್ತವೆ. ಈ ಪ್ರದೇಶದ ಸರಾಸರಿ ಮಧ್ಯಾಹ್ನದ ಉಷ್ಣತೆ ಆಗಾಗ್ಗೆ 90 ಫ್ಯಾ. ಗಳನ್ನೂ ಮೀರಿರುತ್ತದೆ. ವಾರ್ಷಿಕ ಮಳೆಯ ಸರಾಸರಿ 30. ಉನ್ನತ ಪ್ರದೇಶಗಳಲ್ಲಿ 40-50 ಮಳೆ ಬೀಳುತ್ತದೆ. ಇಲ್ಲಿ ಬಗೆ ಬಗೆಯ ಗುಣಗಳ ಮಣ್ಣುಗಳಿವೆ. ಎತ್ತರ ಪ್ರದೇಶದಲ್ಲಿ ನಿತ್ಯಹಸುರ ಕಾಡುಗಳೂ ಉಳಿದೆಡೆಗಳಲ್ಲಿ ಬಗೆಬಗೆಯ ಹುಲ್ಲುಗಾಡುಗಳೂ ಇವೆ.

 ಇಲ್ಲಿರುವ ಜನರ ಗಣಗಳಲ್ಲಿ ಹಾ ಅತ್ಯಂತ ದೊಡ್ಡದು. ಈ ಜನ ಕಿಗೋಮದ ಎಲ್ಲ ಕಡೆಗಳಲ್ಲಿಯೂ ಹರಡಿದ್ದಾರೆ. ಇವರ ಸಂಖ್ಯೆ 2.69.100 (1957). ರುಂಡಿಗಳ ಸಂಖ್ಯೆ 84,400. ಇವರು ಹಾಗಳನ್ನೇ ಬಹಳಮಟ್ಟಿಗೆ ಹೋಲುತ್ತಾರೆ. ನ್ಯಾಂವೇಜಿ, ವಿನ್ಜಾó (ಬಿನ್ಜಾó) ಕಿಕೋ (ನ್ಯಾಹೋಜó) ಇವರು ಇತರರು. ಕಿಕೋ ಜನ ಬಹುತೇಕ ಅಜ್ಞಾತವಾಸಿಗಳು. ಇವರು ಮಲಾಗರಾಸಿಯ ಜವುಗು ಪ್ರದೇಶಗಳಲ್ಲಿದ್ದಾರೆ.

 ಕಿಗೋಮ ಪ್ರದೇಶದ ಮುಖ್ಯ ಪಟ್ಟಣ ಕಿಗೋಮ. ಟಾಂಗನ್ಯೀಕ ಸರೋವರದ ದಡದಲ್ಲಿದೆ. ಡಾರ್ ಎಸ್ ಸಲಾಮಿನಿಂದ ಇಲ್ಲಿಗೆ ರೈಲ್ವೆಯುಂಟು. ಹತ್ತಿ, ಮೆಕ್ಕೆ ಜೋಳ, ಧಾನ್ಯಗಳು ಮತ್ತು ಎಣ್ಣೆಬೀಜಗಳು ಈ ಪ್ರದೇಶದ ಪ್ರಮುಖ ಬೆಳೆಗಳು. ಸಿಹಿ ಗೆಣಸು, ಆಲೂಗೆಡ್ಡೆ, ಬತ್ತ ಮತ್ತು ಸಂಬಾರ ಪದಾರ್ಥಗಳನ್ನೂ ಕಾಫಿ ಮತ್ತು ಹೊಗೆಸೊಪ್ಪುಗಳನ್ನೂ ಬೆಳೆಯುತ್ತಾರೆ. ಜೇನುಮೇಣ ಸಂಗ್ರಹಣ ಮತ್ತು ಮೀನುಗಾರಿಕೆ ಎರಡು ಮುಖ್ಯ ಉಪಕಸಬುಗಳು. ತುಪ್ಪದ ತಯಾರಿಕೆ ಚರ್ಮದ ಹದಗಾರಿಕೆ- ಈ ಕಸಬುಗಳೂ ಉಂಟು. ಬೆಲೆಬಾಳುವ ಮರದ ದಿಮ್ಮಿಗಳು ಇಲ್ಲಿ ದೊರಕುತ್ತವೆ. ಉವಿನ್ಜದ ಉಪ್ಪಿನ ಊಟೆಗಳಲ್ಲಿ ವರ್ಷವರ್ಷವೂ ಹೇರಳವಾಗಿ ಉಪ್ಪಿನ ಉತ್ವದನೆಯಾಗುತ್ತದೆ. ಈ ಪ್ರದೇಶದಲ್ಲಿ ಟ್ಸೆಟ್ಸಿ ನೊಣದ ಅಪಾಯ ಅಧಿಕ. ನಿದ್ರಾವ್ಯಾಧಿ ವರ್ಷವರ್ಷವೂ ಮರುಕೊಳಿಸುತ್ತಿರುತ್ತದೆ.

(ಕೆ.ಎನ್.ಸಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ